Monday 19 January 2015





ತ್ಯಾಗ 

ಅಕ್ಕಪಕ್ಕದ ಊರಿನವರಾದ  ಲತಾ ಮತ್ತು ಆನಂದ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು.  ಬೇರೆ ಬೇರೆ  ಕಾಲೇಜುಗಳಲ್ಲಿ ಓದುತ್ತಿದ್ದರೂ ಅವರಲ್ಲಿ ಪ್ರೀತಿ ಗಾಢವಾಗಿತ್ತು. ಆನಂದನಿಲ್ಲದೆ ಲತಾಳಿಲ್ಲ, ಲತಾಳಿಲ್ಲದೇ ಆನಂದನಿಲ್ಲ ಎನ್ನುವಷ್ಟರಮಟ್ಟಿಗೆ ಬೆಳೆದಿತ್ತು ಅವರ ಪ್ರೇಮ. 
ಲತಾ ಮತ್ತು ಆನಂದರ ಭೇಟಿ ಒಂದು ಆಕಸ್ಮಿಕವೆಂದೇ ಹೇಳಬಹುದು.  ಅಂದು ಅನಿರೀಕ್ಷಿತವಾಗಿ ಬಂದ್ ಘೋಷಿಸಲ್ಪಟ್ಟಿತ್ತು.   ಬೆಳಿಗ್ಗೆ ಎಂದಿನಂತೆ ಕಾಲೇಜಿಗೆ ಹೋದ ಲತಾ ಹನ್ನೊಂದೂವರೆಗೆ ಕಾಲೇಜಿನಿಂದ ಮನೆಗೆ ಹೊರಟಿದ್ದಳು.  ಒಂದಾದ್ರೂ ಬಸ್ ಬರಬಹುದೆಂಬ ನಿರೇಕ್ಷೆಯಲ್ಲಿ ಬಸ್ಸ್ಟಾಂಡಿನಲ್ಲಿ ನಿಂತಿದ್ದಳು. ಬರೇ ರಿಕ್ಷಾ, ಕಾರು, ದ್ವಿಚಕ್ರವಾಹನಗಳು ಓಡಾಡುತ್ತಿದ್ದವು.  ಬಸ್ ನ   ಸುಳಿವೇಯಿರಲಿಲ್ಲ.  ಕುರುಡಿಯಾದ ಅವಳಿಗೆ ಲಿಫ್ಟ್ ಕೊಡಲು ಯಾರೂ ಮುಂದೆ ಬರಲಿಲ್ಲ.   ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ತನ್ನ ಕಾಲೇಜಿನಿಂದ ಹೊರಟ ಆನಂದನಿಗೆ, ಕುರುಡರ ಶಾಲೆಯ ಬಳಿಯ ಬಸ್ಸ್ಟಾಪಿನಲ್ಲಿ  ಒಂಟಿ ಹೆಣ್ಣು ನಿಂತಿರುವುದು ಕಾಣಿಸಿತು.  ಪಾಪ!  ಕಣ್ಣು ಕಾಣುವುದಿಲ್ಲ.  ಇವತ್ತು ಬಸ್ಸುಗಳೂ  ಬರುವುದಿಲ್ಲ.  ಇವಳನ್ನು ಹೀಗೇ ಬಿಡಬಾರದೆಂದು ಯೋಚಿಸುತ್ತಾನೆ. ಡ್ರೈವರ್ ಕಾರ್ ನಿಲ್ಲಿಸುತ್ತಾನೆ. ಲತಾಳ ಬಳಿಗೆ ಬಂದು 'ನೋಡಿ ನೀವು ಇಲ್ಲಿ ಎಷ್ಟು ಹೊತ್ತು ನಿಂತರೂ, ಯಾವುದೇ ಬಸ್ ಬರುವುದಿಲ್ಲ.  ನಿಮಗೆ ಅಭ್ಯಂತರವಿಲ್ಲದಿದ್ದರೆ, ನಾನು ನಿಮ್ಮನ್ನು ಮನೆಗೆ ಬಿಡುತ್ತೇನೆ'.  ಅವನ ಮಾತಿನಲ್ಲಿ ವಿಶ್ವಾಸವಿಟ್ಟ ಲತಾ ಕಾರನ್ನೇರುತ್ತಾಳೆ.  ದಾರಿ ಮಧ್ಯೆ ಪರಸ್ಪರ  ಮಾತನಾಡುತ್ತಾ ಒಬ್ಬರ ಪರಿಚಯ ಮತ್ತೊಬ್ಬರಿಗೆ ಆಗುತ್ತದೆ.  ಹೀಗೆ ಪರಿಚಯ ಪ್ರೇಮಕ್ಕೆ ತಿರುಗುತ್ತದೆ.  ಕುರುಡಿಯೆಂಬ ಅನುಕಂಪವೋ, ಬಡವಳೆಂಬ ಕರುಣೆಯೋ, ಒಟ್ಟಾರೆಯಾಗಿ ಆನಂದನು ಲತಾಳಲ್ಲಿ ಆಕರ್ಷಿತನಾಗುತ್ತಾನೆ.  ತನಗೆ ಸಹಾಯ ಮಾಡುತ್ತಿದ್ದ ಆನಂದನ ಮೇಲೆ ಲತಾಳಿಗೆ ಪ್ರೀತಿ ಮೂಡುವುದು ಸಹಜವೇ! ಲತಾ, ಆನಂದರು ತಿರುಗದ ಜಾಗವಿಲ್ಲವೆಂಬಂತೆ ಪಾರ್ಕುಗಳಿಗೆ, ಹೋಟೆಲ್ ಗಳಿಗೆ  ಸುತ್ತಾಡುತ್ತಾರೆ.   ಜೊತೆಯಲ್ಲಿ ವಿದ್ಯಾಭ್ಯಾಸವೂ ಮುಂದುವರಿಯುತ್ತದೆ. 

ಇಬ್ಬರ ವಿದ್ಯಾಭ್ಯಾಸವೂ ಮುಗಿಯುತ್ತದೆ.  ಇಬ್ಬರೂ ಮದುವೆಯಾಗಲು ಬಯಸುತ್ತಾರೆ.  ಇಷ್ಟರಲ್ಲಿ ಅದ್ಯಾರೋ ಲತಾಳಿಗೆ ಕಣ್ಣು ದಾನ ಮಾಡುತ್ತಾರೆ.  ಕಣ್ಣಿನ  ಕಟ್ಟು ಬಿಚ್ಚುವಾಗ ಲತಾ ತನ್ನ ಪ್ರಿಯತಮನಾದ ಆನಂದನನ್ನು ನೋಡಬಯಸುತ್ತಾಳೆ.  ಆದರೆ, ಅವನಿಗೆ ಅಲ್ಲಿಗೆ ಬರಲು ಆಗದ ಕಾರಣ, ಅವನ ಪೋಟೋವನ್ನು ತೋರಿಸುತ್ತಾರೆ.  ಆನಂದನನ್ನು ಕಂಡ ಲತಾಳಿಗೆ ತುಂಬಾ ಖುಶಿಯಾಗುತ್ತದೆ.  ಆಸ್ಪತ್ರೆಯಿಂದ ಬಿಡುಗಡೆಯಾದ ಲತಾ ಆನಂದನನ್ನು ಕಾಣಲು ಅವನ ಮನೆಗೆ ಹೋಗುತ್ತಾಳೆ.  
ಆನಂದನನ್ನು ಕಂಡ ಲತಾಳಿಗೆ 'ಶಾಕ್ ' ಹೊಡೆದಂತಾಗುತ್ತದೆ. ತಾನು ಪ್ರೀತಿಸುತ್ತಿದ್ದ ಆನಂದನು ಇವನೇ ಏನು?  ತಾನು ಫೋಟೋದಲ್ಲಿ ನೋಡಿದ 
ಆನಂದ ಇವನೇ!  ಲತಾ ಒಂದು ಕ್ಷಣ ಸ್ಥಂಭೀಭೂತಳಾದಳು. ಆನಂದನೇ ಮಾತನಾಡುತ್ತಾನೆ.  "ಈಗ ಹೇಗಿದ್ದೀಯ?  ನಮ್ಮ ಮದುವೆ ಯಾವಾಗ?" ಮದುವೆ ಎಂದಾಕ್ಷಣ ಲತಾಳ ಸಿಟ್ಟು ನೆತ್ತಿಗೇರಿತು.  ಅವಳು ನುಡಿಯುತ್ತಾಳೆ, "ನನಗೆ ನೀನು ಕುರುಡನೆಂದು ಗೊತ್ತಿರಲಿಲ್ಲ.  ಮೊದಲೇ ಗೊತ್ತಿದ್ದಿದ್ದರೆ ನಿನ್ನ ಸಹವಾಸವನ್ನೇ ಮಾಡುತ್ತಿರಲಿಲ್ಲ.  ಕುರುಡನಿಗೆ ಮದುವೆಯೊಂದು ಕೇಡು.  ನೀನು ಶ್ರೀಮಂತನಾದರೇನು, ನಿನ್ನ ದಾಸಿ ನಾನಾಗಲಾರೆ.  ನನ್ನ ಜೀವಮಾನವಿಡೀ ನಿನ್ನ ಸೇವೆಯಲ್ಲೇ ಕಳೆಯಲು ನಾನು ಸಿದ್ಧಳಿಲ್ಲ.  ದಯವಿಟ್ಟು ನನ್ನನ್ನು ಮರೆತುಬಿಡು. ಇನ್ನೊಮ್ಮೆ ನನ್ನ ಭೇಟಿಮಾಡುವ ಪ್ರಯತ್ನ ಮಾಡಬೇಡ. ಗುಡ್ ಬೈ" ಎಂದು ಸಿಟ್ಟಿನಿಂದ ನುಡಿದು ಅಲ್ಲಿಂದ ಹೊರಟು  ಹೋಗುತ್ತಾಳೆ.  
ಇದಾದ ಒಂದು ವಾರದ ನಂತರ, ಅವಳ ಹೆಸರಿಗೆ ಒಂದು ಪತ್ರ ಬರುತ್ತದೆ.  ಪತ್ರ ಒಡೆದು ಓದುತ್ತಾಳೆ,  "ನಿನ್ನ ಹೊಸಬಾಳು ಸುಖಮಯವಾಗಲಿ.  ಆದರೆ, ನನ್ನದೊಂದು ಕೊನೆಯ ಕೋರಿಕೆ.  ದಯವಿಟ್ಟು ನಡೆಸಿಕೊಡು.  ನನ್ನ ಕಣ್ಣುಗಳು ನಿನ್ನ ಬಳಿ ಇವೆ.  ಅವುಗಳನ್ನು ಜೋಪಾನವಾಗಿ ನೋಡಿಕೋ.  ಇಂತಿ, ಎಂದಿಗೂ ನಿನ್ನವನಾಗಲಾರದ ಆನಂದ." ಪತ್ರ ಓದಿದ ಲತಾ ಕುಸಿದು ಬಿದ್ದಳು. 

             




No comments:

Post a Comment