Wednesday, 14 January 2015

ಅಮ್ಮಾ  ....... 

ಅಮ್ಮಾ! ನೀನಂದು  ಎಷ್ಟೊಂದು ಕಷ್ಟಪಟ್ಟೆ , 
 ನನ್ನನ್ನೀ ಭೂಮಿಗೆ ತರಲು 
ನವಮಾಸಗಳು ಹೊಟ್ಟೆಯಲ್ಲೇ ಹೊತ್ತು ತಿರುಗಿದೆ ,
 ಆಗದೆ ಕೆಳಗಿಡಲು 
ನಾನೆಂದೂ ಭಾರವಾಗಲಿಲ್ಲ ನಿನ್ನ ಜೀವಕೆ ,
ಆದರೆ ನೀನಿಂದು ಭಾರವಾದೆ ನನ್ನ ಸಂಸಾರಕೆ 
ಹೆರಿಗೆ ಒಂದು ಪುನರ್ಜನ್ಮ ಎನ್ನುವರು ತಿಳಿದವರು ,
ಅನುಭವಿಸಿದವರಿಗೇ ಗೊತ್ತು ಅದರ ನೋವು 
ಎಂದರು ಬಲ್ಲವರು 
ಅದನ್ನೂ ಮೀರಿ ನಗುತ್ತಾ ಜನ್ಮ ಕೊಟ್ಟೆ ನೀನನಗೆ,
ಇದಕ್ಕೆ ಬದಲಾಗಿ ಏನು ಕೊಡಬಲ್ಲೆ ನಾನಿನಗೆ 
ನಾನು ಮಾಡುತ್ತಿದ್ದ ಮಲಮೂತ್ರಗಳನ್ನು 
ಖುಷಿಯಿಂದ ಸ್ವಚ್ಛಮಾಡುತ್ತಿದ್ದೆ ನೀನನಗಾಗಿ,
ನೀನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ 
ವೃದ್ಧಾಶ್ರಮ ತೋರಿಸಿದೆ ನಾ ನಿನಗಾಗಿ 
ನಾನು ನಕ್ಕರೆ ನೀನೂ ನಗುತ್ತಿದ್ದೆ ಅಂದು,
ನಿನ್ನ ನಗುವೇ ಬೇಡವಾಗಿದೆ ನನಗಿಂದು
ಅಂದು ನಾನು ಅತ್ತರೆ ನೀನೂ ಅಳುತ್ತಿದ್ದೆ ,
ಇಂದು ನೀನತ್ತರೆ ನಾನೇಕೆ ಅಳಲಿ ಎಂದು ಕೇಳುತ್ತಿದ್ದೆ 
ಊಟಕ್ಕೆ ನಾ ಒಲ್ಲೆನೆಂದಾಗ ನೀ ತೋರಿಸುವೆ 
ಬಾನಲ್ಲಿ ಚಂದಿರ ಬಂದ ನೋಡು 
ಉಣ್ಣಲು ನೀ ಕೂತಾಗ ನಾನಂದೆ 
ನೀನಿಲ್ಲಿಂದ  ಬೇಗ ಓಡು 
ಅಂದು ನಾನುಣ್ಣುದೆ ಹೋದರೆ ನೀನುಣ್ಣೆ 
ಇಂದು ನೀನುಣ್ಣುದೆ ಹೋದರೂ ನಾನುಣ್ಣಬಲ್ಲೆ 
ನಿನ್ನ ರಕ್ತ ಮಾಂಸಗಳನ್ನೇ ಹಂಚಿಕೊಂಡು ಹುಟ್ಟಿರುವೆ 
ನಿನ್ನ ರಕ್ತವನ್ನೇ ಹೀರಿ ನಿನ್ನನ್ನು ಹೊರಗಟ್ಟಿರುವೆ 
ಅಂದು ನಾನು ಅತ್ತರೆ ನೀ ಬಂದು ಕೇಳುತ್ತಿದ್ದೆ 
ಏನಾಯಿತು ನನ್ನ ಮುದ್ದಿನ ಕಂದಾ!
ಆದರೆ, ಇಂದು ನಿನ್ನನ್ನು ಕಂಡರೆ ನನಗಾಗುವುದು 
ಇದೊಂದು ಬೇಡದ ಬಂಧ! 
ನಾ ತಪ್ಪು ಮಾಡಿದರೆ ನೀನಂದು 
ಕಟ್ಟುತ್ತಿದ್ದೆ ದೇವರಿಗೆ ದಂಡ  
ನೀನೇನನ್ನೂ ಮಾಡದೆ ಕಾಣಿಸಿದೆ 
ನನಗೆ ಬರೀ ಕೂಳು ದಂಡ 
ಬಡತನದಲ್ಲೂ ನೀ ಸಾಕಿದ ಪರಿ ನಾಬಲ್ಲೆ 
ಸಿರಿತನದಲ್ಲೂ ನಿನ್ನನ್ನು ಸಾಕಲು ನಾನೊಲ್ಲೆ 

1 comment:

  1. ammana madilina sukha berellu illa. idannu nenapittukolliro huchchappagalira!

    ReplyDelete